Skip to main content

ತಂದೆಯ ಬುಧ್ಧಿ ಮಾತುಜೀವನದಲ್ಲಿ ಯಾವತ್ತೂ ಫ್ರೆಂಡ್ ಗಳನ್ನೂ ಮರೆಯಬೇಡ

ಮಕ್ಕಳು ಜೊತೆಗಿದ್ದರೆ ಸಾಕು: ಅವರಿಗೆ ಏನಾದರೂ ಬುದ್ಧಿಮಾತು ಹೇಳುವುದು ಅಪ್ಪನಿಗೆ
ಅಭ್ಯಾಸವಾಗಿಬಿಟ್ಟಿತ್ತು. ಬುದ್ಧಿಮಾತನ್ನಷ್ಟೇ ಹೇಳಿ ಅವರು ಸುಮ್ಮನಾಗುತ್ತಿರಲಿಲ್ಲ, ಅದಕ್ಕೆ ಹೊಂದುವಂಥ ಒಂದು ಉಪಕಥೆಯನ್ನೂ ಹೇಳುತ್ತಿದ್ದರು. '' ನಾನು ಹೇಳುವುದನ್ನು
ಗಮನವಿಟ್ಟು ಕೇಳಿಸ್ಕೊಳ್ಳಿ. ನೀವು ಮುಂದೊಮ್ಮೆ ಕಷ್ಟಕ್ಕೆ ಸಿಕ್ಕಿಕೊಂಡಾಗ ಈ ಮಾತುಗಳ ಮಹತ್ವ ಗೊತ್ತಾಗುತ್ತೆ ನಿಮಗೆ...'' ಎನ್ನುತ್ತಿದ್ದರು. ಈ ಬಗೆಯ ಮಾತುಗಳು, ನನ್ನನ್ನೂ
ಸೇರಿದಂತೆ ಹೆಚ್ಚಿನವರಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ, ಏನಾದರೂ ಕಾರಣ ಹೇಳಿ ಅಪ್ಪನ '' ಕೊರೆತದಿಂದ'' ಪಾರಾಗುತ್ತಿದ್ದೆವು. ಮದುವೆಯಾದ ಮೇಲಂತೂ, ಅಪ್ಪನಿಂದ ದೂರ ಉಳಿಯಲು ನನಗೊಂದು ಪ್ರಬಲ ಕಾರಣವೇ ಸಿಕ್ಕಿಬಿಟ್ಟಿತು. ಸದಾ ಹೆಂಡತಿಯ ಹಿಂದೆಯೇ ಅಲೆಯುತ್ತಾ ಅಪ್ಪನನ್ನು ಅವಾಯ್ಡ್ ಮಾಡತೊಡಗಿದೆ. ಕಡೆಗೊಮ್ಮೆ, ಪಕ್ಕದ ಜಿಲ್ಲೆಗೆ ಟ್ರಾನ್ಸ್ ಫರ್ ಆಗಿದ್ದನ್ನೇ ನೆಪಮಾಡಿಕೊಂಡು ಸಂಸಾರದೊಂದಿಗೆ ಶಿಫ್ಟ್ ಆಗಿಬಿಟ್ಟೆ. ಹೆತ್ತವರ ಜೊತೆಗೇ ಉಳಿದರೆ, ಯಾವ್ಯಾವುದೋ ಜವಾಬ್ದಾರಿಗಳು ಮೈಮೇಲೆ ಬೀಳ್ತಾನೇ ಇರ್ತವೆ. ಪ್ರೈವೆಸಿ ಅನ್ನುವುದೇ ಇರೋದಿಲ್ಲ. ಹೀಗಾದರೆ ನಾನು ಲೈಫ್ ನ ಎಂಜಾಯ್ ಮಾಡುವುದು ಯಾವಾಗ ಅನ್ನುವುದು ನನ್ನ ನಿಲುವಾಗಿತ್ತು.
ಹೀಗೇ ೧೦ ವರ್ಷಗಳು ಕಳೆದುಹೋದವು. ಈ ಅವಧಿಯಲ್ಲಿ ಇಬ್ಬರು ಮಕ್ಕಳು ಮನೆ ತುಂಬಿದ್ದರು.ಬಿ ಪಿ ಜೊತೆಯಾಗಿತ್ತು. ಸ್ವಲ್ಪ ಹೊಟ್ಟೆ ಬಂದಿತ್ತು. ಅತ್ತ, ಕಾಲನ ಹೊಡೆತದಿಂದ ಅಪ್ಪನೂ ಡಲ್ ಆಗಿದ್ದ. ಈ ಸುದೀರ್ಘ ಅವಧಿಯಲ್ಲಿ ವರ್ಷವರ್ಷವೂ ಹಬ್ಬ- ಹರಿದಿನ, ಸಂಬಂಧಿಗಳ ಮದುವೆ, ಮತ್ಯಾವುದೋ ಕುಟುಂಬದ ಕಾರ್ಯಕ್ರಮದ ನೆಪದಲ್ಲಿ ವರ್ಷಕ್ಕೆ ಐದಾರು ಬಾರಿ ಊರಿಗೆ ಹೋಗಿದ್ದೆನೇನೋ. ಈಗ ಇದ್ದಕ್ಕಿದ್ದಂತೆ, ಅಪ್ಪನನ್ನು ನೋಡಬೇಕು, ಅವನ ಮಾತು ಕೇಳಬೇಕು, ಅವನೊಂದಿಗೆ ಒಂದಷ್ಟು ದಿನಗಳನ್ನು ಕಳೆಯಬೇಕೆಂದು ತೀವ್ರವಾಗಿ ಅನಿಸತೊಡಗಿತು. ಅದೇ
ಸಮಯಕ್ಕೆ ಮಕ್ಕಳಿಗೆ ಬೇಸಿಗೆ ರಜೆಯೂ ಶುರುವಾಯಿತು. ಹೇಗಿದ್ರೂ ರಜೆಯಿದೆ. ಹತ್ತಿಪ್ಪತ್ತು ದಿನ ಊರಲ್ಲಿದ್ದು ಬರೋಣ ಎಂಬ ನಿರ್ದಾರದೊಂದಿಗೆ ಎಲ್ಲರೂ ಹೊರಟೆವು.
ಅದೊಂದು ಮಧ್ಯಾಹ್ನ ನಿಂಬೆಹಣ್ಣಿನ ಜ್ಯುಸ್ ಕುಡಿದು ಲೋಟವನ್ನು ಕೆಳಗಿಡುತ್ತಾ ಅಪ್ಪ ಹೇಳಿದರು: ಒಂದು ಬುದ್ಧಿಮಾತು ಹೇಳ್ತೇನೆ ಕಣಯ್ಯಾ. ಜೀವನದಲ್ಲಿ ಯಾವತ್ತೂ ಫ್ರೆಂಡ್ ಗಳನ್ನೂ ಮರೆಯಬೇಡ. ದಿನಕ್ಕೊಮ್ಮೆಯಾದ್ರೂ ಅವರನ್ನು ಮಾತಾಡಿಸು. ನಾಳೆಗೆ ಹೇಗೋ ಏನೋ...
ಕಷ್ಟಕಾಲದಲ್ಲಿ ಫ್ರೆಂಡ್ ಗಳು ಬೇಕಾಗ್ತಾರೆ... ''
ಈ ಮಾತಲ್ಲಿ ನನಗಂತೂ ನಂಬಿಕೆ ಇರಲಿಲ್ಲ. ಫ್ರೆಂಡ್ ಗಳಿಂದ ತೊಂದರೆಯೇ ಜಾಸ್ತಿ ಅನ್ನುವುದು ನನ್ನ ನಂಬಿಕೆಯಾಗಿತ್ತು. ಏಕೆಂದರೆ, ಒಂದಿಬ್ಬರು ಗೆಳೆಯರು ಸಾಲ ಪಡೆದು ಅದನ್ನು ವಾಪಸ್ ಮಾಡದೆ ಸತಾಯಿಸುತ್ತಿದ್ದರು. ಇನ್ನೊಂದಿಬ್ಬರು, ಹೊಟ್ಟೆಕಿಚ್ಚಿನಿಂದ ಕುದಿಯುತ್ತಿದ್ದರು. ಮತ್ತೊಬ್ಬ, ನನ್ನ ಮೇಲೆ ಇಲ್ಲಸಲ್ಲದ ಗಾಸಿಪ್ ಹಬ್ಬಿಸಿದ್ದ! ಇದನ್ನೆಲ್ಲಾ ಅಪ್ಪನಿಗೆ ಹೇಳಿ, ಇಂಥಾ ಫ್ರೆಂಡ್ ಗಳಿಂದ ಏನಪ್ಪಾ ಉಪಯೋಗ? ಇವರೆಲ್ಲಾ
ಕಾಸಿನ ಅಗತ್ಯ ಇದ್ದಾಗ ಮಾತ್ರ ಬರ್ತಾರೆ. ಇಂಥವರು ಇದ್ರೆಷ್ಟು, ಬಿಟ್ಟರೆಷ್ಟು?"ಅಂದೆ.
''ಛೆ ಛೆ, ಅಂಥವರಲ್ಲ ಕಣಯ್ಯಾ. ನಿನ್ನ ಬಾಲ್ಯದ ಗೆಳೆಯರು ಅಂತ ಇದ್ದಾರಲ್ಲ, ಅವರಲ್ಲಿ ಎಷ್ಟೋ ಜನ ಈವರೆಗೂ ನಿನ್ನಿಂದ ಯಾವುದೇ ಸಹಾಯ ಕೇಳಿಲ್ಲ. ಆದ್ರೆ ಈಗಲೂ ತುಂಬಾ ಪ್ರೀತಿ- ವಿಶ್ವಾಸ ತೋರಿಸ್ತಾರೆ. ನೀನೇನು ಮಾಡಿದ್ದೀಯಾ ಅಂದ್ರೆ- ನಿನ್ನದೇ ಆಫೀಸ್ ನ, ನಿನ್ನಂತೆಯೇ ಸಂಬಳ ಪಡೆಯುವ ಜನರನ್ನು ಹತ್ತಿರ ಬಿಟ್ಕೊಂಡಿದೀಯ. ಅವರನ್ನೇ ಫ್ರೆಂಡ್ಸ್ ಅಂತ ತಿಳಿದಿದ್ದೀಯ. ಅದನ್ನೇ ತಪ್ಪು ಅನ್ನೋದು. ಇವರೆಲ್ಲಾ ನೀನು ಚೆನ್ನಾಗಿರುವಷ್ಟು ದಿನ ಮಾತ್ರ ನಿನ್ನ ಜೊತೆ ಇರ್ತಾರೆ. ನಾಳೆ ಅಕಸ್ಮಾತ್ ನೀನು ಏನಾದರೂ ತೊಂದರೆಗೆ ಸಿಕ್ಕಿಕೊಂಡರೆ- ತಕ್ಷಣ ಇವರೆಲ್ಲಾ ಮಾಯಾ ಆಗ್ತಾರೆ. ಅಂಥವರಿಂದ ಪ್ರಯೋಜನವಿಲ್ಲ. ಯಾವುದೇ ಪ್ರತಿಫಲ ಬಯಸದೇ ಬಂದು ನಾಲ್ಕು ಸಮಾಧಾನದ ಮಾತಾಡ್ತಾರಲ್ಲ; ಅಂಥವರು ಬೇಕು. ಅಂಥವರ ಜೊತೆ ಕಾಂಟ್ಯಾಕ್ಟ್ ಇಟ್ಕೋ..'' ಅಂದರು ಅಪ್ಪ. ಅಷ್ಟಕ್ಕೇ ಸುಮ್ಮನಾಗದೆ ಐದಾರು ಜನರ ಹೆಸರನ್ನೂ ಸೂಚಿಸಿದರು.
ಅಪ್ಪ ಹೇಳಿದ್ದಕ್ಕೆಲ್ಲಾ ತಲೆಯಾಡಿಸಿಕೊಂಡು ಕೂರಲು ಆಗುತ್ತಾ? ಫ್ರೆಂಡ್ಸ್ ಅಂತ ಹೊರಟ್ರೆ, ಫ್ಯಾಮಿಲಿ ನ ಮಿಸ್ ಮಾಡ್ಕೋಬೇಕಾಗುತ್ತೆ. ನಮಗೆ ಫ್ಯಾಮಿಲಿ ಮುಖ್ಯ. ಫ್ಯಾಮಿಲಿ ಜೊತೆ ಲೈಫ್ ನ ಎಂಜಾಯ್ ಮಾಡಬೇಕು. ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ನಾವು ರಿಟೈರ್ಡ್ ಆಗುವ ಮೊದಲೇ ಅವರಿಗೊಂದು ಕೆಲಸ ಸಿಗುವ ಹಾಗೆ ನೋಡ್ಕೋಬೇಕು... ಇಷ್ಟೇ ನನ್ನ ತಲೆಯಲ್ಲಿತ್ತು. ಹಾಗಾಗಿ ನನ್ನಿಷ್ಟದಂತೆಯೇ ಬದುಕಿಬಿಟ್ಟೆ. ಆದರೆ ಅಪ್ಪನ ಮಾತುಗಳು ಮೇಲಿಂದಮೇಲೆ ನೆನಪಾಗುತ್ತಲೇ ಇದ್ದವು. ಆಗೆಲ್ಲಾ ಅನಿವಾರ್ಯವಾಗಿ ಬಾಲ್ಯದ ಗೆಳೆಯರಿಗೆ ಫೋನ್ ಮಾಡಿ ಅಥವಾ ಎಲ್ಲಾದರೂ ಭೇಟಿ ಮಾಡಿ ನಾಲ್ಕಾರು ಮಾತಾಡಿ ಸುಮ್ಮನಾಗುತ್ತಿದ್ದೆ.
*******
ಓಡುವ ಕಾಲಕ್ಕೆ ಯಾವ ತಡೆ? ಅಪ್ಪನೀಗ ಗೋಡೆಯ ಮೇಲಿನ ಚಿತ್ರವಾಗಿದ್ದರು. ಇನ್ಮುಂದೆ ಮನೆಗೆ ನಾನೇ ಹಿರಿಯ ಅಂದುಕೊಳ್ಳುವ ವೇಳೆಗೆ ನನಗೂ 60 ವರ್ಷ ತುಂಬಿ, ಸೇವೆಯಿಂದ ನಿವೃತ್ತಿಯೂ ಆಯಿತು. '' ಕೆಲಸ ಇಲ್ಲ ಎಂದು ಗೊತ್ತಾದ ತಕ್ಷಣ, ಅದುವರೆಗೂ ಸುತ್ತಲೂಇರುತ್ತಿದ್ದ ಜನ ಮಾಯವಾದರು. ಈ ಮಧ್ಯೆ ಮತ್ತೆ ಮೂರು ವರ್ಷ ಕಳೆಯುವುದರೊಳಗೆ ಹೆಂಡತಿಗೆ ಏನೇನೋ ದೈಹಿಕ ತೊಂದರೆಗಳು ಕಾಣಿಸಿಕೊಂಡವು. ಇನ್ನೊಂದು ಕಡೆ ಮಕ್ಕಳು ನಾನು ಹೇಳಿದ್ದಕ್ಕೆಲ್ಲಾ ತಕರಾರು ತೆಗೆಯತೊಡಗಿದ್ದರು. ಕೆಲಸ
ಹುಡುಕಿಕೊಂಡು ಬೇರೆ ಊರಿಗೆ ಅಥವಾ ಬೇರೆ ದೇಶಕ್ಕೆ ಹೋಗಿಬಿಡುವ ಮಾತನ್ನಾಡಿದರು.
ಅಲ್ರಯ್ಯ, ನೀವು ಹೋಗಿಬಿಟ್ರೆ ನಮ್ಮನ್ನು ನೋಡಿಕೊಳ್ಳೋರು ಯಾರು? ಅಂದರೆ, ಅದಕ್ಕೆ
ಉತ್ತರಿಸಲೇ ಇಲ್ಲ. ಮರುದಿನ ಇದೇ ಪ್ರಶ್ನೆಯನ್ನು ಸ್ವಲ್ಪ ಜೋರಾಗಿ ಕೇಳಿದಾಗ- ''ಅದಕ್ಕೆಲ್ಲಾ ನಾವೇನು ಮಾಡೋಕಾಗುತ್ತೆ? ನಮಗೆ ನಮ್ಮ ಲೈಫ್ ಮುಖ್ಯ'' ಅಂದುಬಿಟ್ಟರು.
ಮಕ್ಕಳು ಆಸೆಪಟ್ಟಂತೆಯೇ ನಾನು ಬದುಕಿದ್ದೆ. ಅವರನ್ನು ಚೆನ್ನಾಗಿ ಸಾಕಲು- ಓದಿಸಲು ಇನ್ನಿಲ್ಲದ ರಿಸ್ಕ್ ತೆಗೆದುಕೊಂಡಿದ್ದೆ. ನನಗೆ ಫ್ಯಾಮಿಲಿಯೇ ಮುಖ್ಯ ಅನ್ನುತ್ತಾ
ಗೆಳೆಯರು- ಬಂಧುಗಳನ್ನು ದೂರಮಾಡಿದ್ದೆ. ಆದರೀಗ, ಆ ಮಕ್ಕಳೇ ನನ್ನಿಂದ ದೂರ ಹೋಗುವ ಹವಣಿಕೆಯಲ್ಲಿದ್ದರು. ಒರಟಾಗಿ ಮಾತಾಡಿದ್ದರು. ಇಂಥದೊಂದು ಸಂದರ್ಭದ ಕಲ್ಪನೆಯೂ ನನಗಿರಲಿಲ್ಲ. ಇದೇ ಯೋಚನೆಯಲ್ಲಿ ಹಣ್ಣಾದೆ. ಅವತ್ತೊಮ್ಮೆ ತಲೆಸುತ್ತು ಬಂದಂತಾಗಿ...
ಮತ್ತೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ಯಾಕೋ ವಿಪರೀತ ಮಾತಾಡಬೇಕು ಅನ್ನಿಸಿತು. ಮನಸ್ಸಿನ ನೋವನ್ನೆಲ್ಲಾ ಹೇಳಿಕೊಳ್ಳಬೇಕನ್ನಿಸಿತು. ಆದರೆ, ನನ್ನ ಮಾತು
ಕೇಳಿಸಿಕೊಳ್ಳಲು ಅಲ್ಲಿ ಯಾರೂ ಇರಲಿಲ್ಲ. ಮಕ್ಕಳು ಆಫೀಸ್ ಗೆ ಹೋಗಿಬಿಟ್ಟಿದ್ದರು. ಹೆಂಡತಿ ಊಟ ತರಲೆಂದು ಮನೆಗೆ ಹೋಗಿದ್ದಳು. ಅಪ್ಪನ ಮಾತುಗಳು ನೆನಪಾಗಿದ್ದೇ ಆಗ. ಒಮ್ಮೆ ಕಾಲ್ ಮಾಡಿ ನೋಡೋಣ ಅಂದುಕೊಂಡು, ಬಾಲ್ಯದ ಇಬ್ಬರು ಗೆಳೆಯರಿಗೆ ಫೋನ್ ಮಾಡಿ
ವಿಷಯ ತಿಳಿಸಿದೆ. ಇದಾಗಿ ಎರಡು ಗಂಟೆಗಳು ಕಳೆದಿಲ್ಲ, ಒಬ್ಬಿಬ್ಬರಲ್ಲ; ಚಡ್ಡಿ ದೋಸ್ತ್ ಗಳಾಗಿದ್ದ ನಾಲ್ವರು ಗೆಳೆಯರು ಬಂದರು! ಅವರಿಗೆ ನನ್ನಿಂದ ಯಾವ ಸಹಾಯವೂ ಆಗಿರಲಿಲ್ಲ. ಸಂಸಾರ ಮೊದಲು, ಸಂಬಂಧ ಆಮೇಲೆ ಅನ್ನುವ ಹಮ್ಮಿನಲ್ಲಿ ನಾನು ಅವರೆಲ್ಲರ ಜೊತೆ
ಬೇಕಾಬಿಟ್ಟಿ ಮಾತಾಡಿದ್ದೆ. ಅದೆಲ್ಲಾ ನೆನಪಾಗಿ ನಾಚಿಕೆಯಾಯಿತು. 
ಉಹೂಂ, ಆ ಗೆಳೆಯರು ಅದೇನನ್ನೂ ನೆನಪಿಸಲಿಲ್ಲ. '' ನಾವೆಲ್ಲಾ ನಿನ್ನ ಜೊತೆಗೆ ಇರ್ತೇವೆ. ಏನೂ ಆಗಲ್ಲ ನಿನಗೆ. ಧೈರ್ಯವಾಗಿರು. ನೀನು ಆಸ್ಪತ್ರೆಯಲ್ಲಿ ಇರುವಷ್ಟೂ ದಿನ ಬೆಳಗ್ಗೆ ಇಬ್ಬರು, ಮಧ್ಯಾಹ್ನ ಇಬ್ಬರು ಬಂದು ಕಂಪನಿ ಕೊಡ್ತೇವೆ. ನನ್ನ ಮಗನನ್ನು ಕಷ್ಟಕಾಲದಲ್ಲಿ ನೋಡ್ಕೊಳ್ರಪ್ಪಾ ಅಂತ ನಿಮ್ಮ ತಂದೆ ಹಿಂದೊಮ್ಮೆ ಹೇಳಿದ್ರು, ಅದೂ ನೆನಪಿದೆ ನಮಗೆ...'' ಅಂದರು. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ಇದ್ದಷ್ಟೂ ದಿನ ತಪ್ಪದೇ ಬಂದರು. ನನ್ನ ಮಾತುಗಳಿಗೆ ಕಿವಿಯಾದರು. ಕಷ್ಟಗಳಿಗೆ ಹೆಗಲಾದರು. ಒಂಟಿತನಕ್ಕೆ ಜೊತೆಯಾದರು.
ಕಡೆಗೊಂದು ದಿನ ಡಿಸ್ಚಾರ್ಜ್ ಆದಾಗ, ಆಸ್ಪತ್ರೆಯಿಂದ ಮನೆಗೂ ಅವರೇ ಕರೆತಂದರು. ಅರ್ಧ ಗಂಟೆ ಜೊತೆಗಿದ್ದು, ಧೈರ್ಯ ಹೇಳಿ ಎದ್ದುಹೋದರು.
ಆಗಲೇ ಮತ್ತೊಮ್ಮೆ ಅಪ್ಪ ಹೇಳಿದ್ದ ಮಾತುಗಳು ನೆನಪಿಗೆ ಬಂದವು: '' ಜೀವನದಲ್ಲಿ ಯಾವತ್ತೂ ಫ್ರೆಂಡ್ ಗಳನ್ನೂ ಮರೆಯಬೇಡ. ಆಗಾಗ ಅವರನ್ನು ಮಾತಾಡಿಸು. ಕಷ್ಟಕಾಲದಲ್ಲಿ ಫ್ರೆಂಡ್ ಗಳು ಬೇಕಾಗ್ತಾರೆ... ''
******
ಅಂದಹಾಗೆ, ಫ್ರೆಂಡ್ ಗಳನ್ನು ಆಗಾಗ ಮಾತಾಡಿಸ್ತಾ ಇದ್ದೀರಿ ತಾನೇ?
( ಡಿಸೆಂಬರ್ 6 ರಂದು ಉದಯವಾಣಿ ದಿನಪತ್ರಿಕೆಯ ಕಲ್ಲು ಸಕ್ಕರೆ ಅಂಕಣದಲ್ಲಿ ಪ್ರಕಟವಾದ ಬರಹ)

Comments

Post a Comment

Popular posts from this blog

ಪ್ಲಾ‍ಸ್ಟಿಕ್ ಡಬ್ಬದಲ್ಲಿ ಊಟ ಮಾಡಿದರೆ ಎನಾಗುತ್ತದೆ ಹೇಳಿ ಪ್ಲಾಸ್ಟಿಕ್ ಡಬ್ಬದ ಊಟ ಬದುಕಲಾ ಅಥವಾ ಸಾಯಲಾ???

 Online Food Delivery ಮೂಲಕ ಅನಿವಾರ್ಯಕ್ಕೋ, ಆಸೆಗೋ ಹೋಟೆಲ್ ನಿಂದ ನೇರ ಮನೆಗೇ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ, ಒಂದಿಷ್ಟು ಬದಲಾವಣೆ ಕಂಡದೆ ಗೀಚಿದ್ದಕ್ಕೂ ಸಾರ್ಥಕ....  'ಪ್ಲಾಸ್ಟಿಕ್ ಡಬ್ಬ' ಅಥವಾ 'ಕಂಟೇನರ್', ಯಾರಿಗಿಲ್ಲ ಇದರ ಪರಿಚಯ? ನಗರ ಪ್ರದೇಶದ ಅತೀ ಹೆಚ್ಚು ಯುವಕರ, ಯುವತಿಯರ, ಉದ್ಯೋಗಿಗಳ ಮತ್ತು ಸಮಯವಿಲ್ಲದವರ ರುಚಿಯಾದ ಆಹಾರ ಸಾಗಿಸುವ ಆಪಧ್ಬಾಂದವ. ಸದಾ ಉರಿಯುತ್ತಿದ್ದ ಅಡುಗೆ ಮನೆಯ ಒಲೆಗೆ ಸೀದಾ ಸೀದಾ ರಜೆ ಘೋಷಿಸಿ ಟಿ.ವಿ ಮುಂದೆ ಕೂತು ಬೇಕಾದ್ದು ತರಿಸಿಕೊಂಡು ತಿನ್ನಬಹುದಾದಷ್ಟು ಬದುಕನ್ನು ಸುಲಭಗೊಳಿಸಿದ ಮಹಾ ಉಪಕಾರಿ. ಕೆಲವೊಮ್ಮೆ ಅನಿವಾರ್ಯಕ್ಕೆ ಹೋಟೆಲ್ ಇಂದ ಆಹಾರ ತರಿಸಿಕೊಂಡು ತಿನ್ನುವಾಗ ಇದನ್ನು ಕಂಡು ಅನಿಸುತ್ತಿದ್ದುದು ಒಂದೇ! ಈ ಪ್ಲಾಸ್ಟಿಕ್ ಡಬ್ಬದ ಬಿಸಿ ಬಿಸಿ ರುಚಿಯಾದ ಊಟ ತಿನ್ನುತ್ತಿರುವುದು ಬದುಕಲಾ ಅಥವಾ ಸಾಯಲು? ಈ ಡಬ್ಬಾ ಎನ್ನುವ ಉಪಕಾರಿ ವಿಚಾರ ಏನೋ ಸರಿಯಿಲ್ಲ ಅನ್ನಿಸಿ ಸುಮ್ಮನೆ ಕೂತು ಗೂಗಲ್ ಕೆಣಕಿದಾಗ ಸಿಕ್ಕಿದ್ದು ಇಷ್ಟು....! ಈ ನಗರ ಪ್ರದೇಶದಲ್ಲಿ ಹೋಟೆಲ್ ನಿಂದ ರುಚಿಯಾದ ಆಹಾರ ಸೀದಾ ಮನೆ ಬಾಗಿಲಿಗೇ ತಲುಪಿಸುವ ಅದೆಷ್ಟೋ ಕಂಪೆನಿಗಳಿವೆ. ಒಬ್ಬೊಬ್ಬರದ್ದು ಒಂದೊಂದು ಗಿಮಿಕ್. ಒಟ್ಟಿನಲ್ಲಿ ಅಡುಗೆ ಮನೆಯ ಒಲೆ ಹಚ್ಚಬಾರದು ಅಷ್ಟೇ ಉದ್ದೇಶ. No cooking day, No cooking month ಎಂಬ ವಿಲಕ್ಷಣ ಆಚರಣೆ ತಲೆಯೊಳಗೆ ತುಂಬಿ ಹೇಗೋ ಒಂದು ಆರ್ಡರ್...

Kumaraswamy assignment 9

Today Quite

  KUMARASWAMY Hiremath